ಗಂಗಾಧರ ಶಾಸ್ತ್ರೀ (ಪಟವರ್ಧನ)

ಬಡೋದೆಯ ಗಾಯಕವಾಡ ವಂಶದ ರಾಜರಿಗೆ 19ನೆಯ ಶತಮಾನದ ಪ್ರಾರಂಭದಲ್ಲಿ ಮುಖ್ಯಮಂತ್ರಿಯಾಗಿದ್ದಾತ. ಅವರ ವಕೀಲನಾಗಿದ್ದನೆಂದೂ ಹೇಳಲಾಗಿದೆ. ಮೇಣವಳಿ ಇವನ ಮೂಲಸ್ಥಾನ. ಇವನ 8ನೆಯ ವಯಸ್ಸಿನಲ್ಲಿ ಈತನ ಅಜ್ಜ ಪಟವರ್ಧನ ಪುಣೆಯನ್ನು ಸೇರಿ ಅಲ್ಲಿ ಪೇಶ್ವೆಯರ ವಾಡೆಯಲ್ಲಿ ಗುಮಾಸ್ತ ಕೆಲಸ ಪಡೆದು ನಿಂತ. ಅದರ ಜೊತೆಗೆ ಹರಿಪಂತ ಫಡಕೆಗೆ ಉಪಾಧ್ಯಾಯನೂ ಆದ. ಪಟವರ್ಧನ ಪೇಶ್ವೆಯಲ್ಲಿ ಗುಮಾಸ್ತೆ ಕೆಲಸ ಮಾಡುತ್ತಾನೆಂಬ ವಿಷಯ ತಿಳಿದಕೂಡಲೆ ಹರಿಪಂತ ಆತನನ್ನು ಉಪಾಧ್ಯಾಯ ವೃತ್ತಿಯಿಂದ ಬಿಡಿಸಿದ. ಆ ಘಟನೆ ನಡೆದ ಬಳಿಕ ಗಂಗಾಧರಶಾಸ್ತ್ರಿ ಅಲ್ಲಿರದೆ ಕೃಷ್ಣಾತೀರಕ್ಕೆ ಹೋಗಿ ತನ್ನ ವಯಸ್ಸಿನ 20ನೆಯ ವರ್ಷದವರೆಗೂ ಶಾಸ್ತ್ರಾಧ್ಯಯನ ಮಾಡಿದ. ಅನಂತರ ಪುಣೆಗೆ ಮರಳಿ, ತನ್ನ ಕುಟುಂಬದವೆರೆಲ್ಲರನ್ನೂ ಕರೆದುಕೊಂಡು ಬಡೋದೆಗೆ ಹೋದ.

	ಗಂಗಾಧರಶಾಸ್ತ್ರಿ ಬಡೋದೆಯಲ್ಲಿ ವಾಕರ್ ಎಂಬ ಇಂಗ್ಲಿಷ್ ಅಧಿಕಾರಿಯ ಆಗ್ರಹದ ಮೇರೆಗೆ ಆಂಗ್ಲರ ಪಕ್ಷದ ಅಧಿಕಾರಿಯಾಗಿ ಗಾಯಕವಾಡರ ದರ್ಬಾರಿನಲ್ಲಿ ನಿಂತ. 1814ರಲ್ಲಿ ಗಾಯಕವಾಡ ಹಾಗೂ ಪೇಶ್ವೆ ಮನೆತನಗಳ ಮಧ್ಯೆ ಇದ್ದ ಕೊಡು-ಕೊಳ್ಳುವ ಲೆಕ್ಕವನ್ನು ತೀರ್ಮಾನಿಸುವ ಕಾರ್ಯನಿಮಿತ್ತ ಶಾಸ್ತ್ರಿ ಬಡೋದೆಯಿಂದ ಪುಣೆಗೆ ಹೋದ. ಇದೇ ಸಮಯವನ್ನು ಸಾಧಿಸಿ ದಿವಾನ ಸೀತಾರಾಮ ರಾವಜಿ ಎಂಬಾತ ಪೇಶ್ವೆ ಬಾಜಿರಾಯನ (1796-1818) ಮನಸ್ಸನ್ನು ಕೆಡಿಸಿ ಗಂಗಾಧರಶಾಸ್ತ್ರಿ ಆಂಗ್ಲರಿಗೆ ಬೇಕಾದವನು ಎಂದು ಮುಂತಾಗಿ ಚಾಡಿ ಹೇಳಿ,ಶಾಸ್ತ್ರಿ ಹೋದ ಕಾರ್ಯದಲ್ಲಿ ಯಶಸ್ವಿಯಾಗದ ಹಾಗೆ ವಿರುದ್ಧ ವಾತಾವರಣ ಸೃಷ್ಟಿಮಾಡಿದ. ಶಾಸ್ತ್ರಿ ತೀರ್ಮಾನಿಸಲು ಹೋದ ಕೆಲಸ ಎಳಕಲಿಗೆ ಬಿತ್ತು. ಎಷ್ಟೋ ದಿವಸಗಳು ಕಳೆದ ಮೇಲೆ ಒಮ್ಮೆ ಆತ 2ನೆಯ ಬಾಜಿರಾಯನೊಂದಿಗೆ ದೇವತಾದರ್ಶನಕ್ಕೆಂದು ಶ್ರೀಕ್ಷೇತ್ರ ಪಂಢರಪುರಕ್ಕೆ ಹೋಗಿ ಮರಳುವಾಗ್ಗೆ ದಾರಿಯಲ್ಲಿ ಯಾರೊ ಇವನನ್ನು ಕಡಿದು ತುಂಡು ಮಾಡಿ ಹಾಕಿದರೆಂದು ಒಂದು ಹೇಳಿಕೆಯಿದೆ. ಲೇವಾದೇವಿ ಲೆಕ್ಕ ನಿರ್ಣಯಿಸಲು ಬಂದ ಇವನನ್ನು ತ್ರಿಂಬಕಜೀ ಎಂಬಾತನ ಕುತಂತ್ರದಿಂದ 2ನೆಯ ಬಾಜೀರಾಯ ನಾಸಿಕಕ್ಕೆ ಕಳುಹಿಸಿ ಅಲ್ಲಿ ಕೊಲ್ಲಿಸಿದನೆಂದು ಇನ್ನೊಂದು ಹೇಳಿಕೆಯಿದೆ. ವಸ್ತುಸ್ಥಿತಿ ಏನೇ ಇರಲಿ, ಗಂಗಾಧರಶಾಸ್ತ್ರಿಯ ಕೊಲೆಯಾದ್ದಂತೂ ನಿಜ. ಇದು ತಮ್ಮ ಸರ್ಕಾರಕ್ಕೆ ಅಪ್ರಿಯವಾದ ಕಾರ್ಯವೆಂದು ಇಂಗ್ಲಿಷರು ಬಗೆದು ಪೇಶ್ವೆಗೆ ಇದ್ದ ಅಧಿಕಾರವೆಲ್ಲವನ್ನು ಕಿತ್ತುಕೊಂಡರು. 

	ಈತನ ವಂಶಜರು ಇನ್ನೂ ಪುಣೆ ಹಾಗೂ ಬಡೋದೆಗಳಲ್ಲಿ ಇದ್ದಾರೆ. ಪೇಶ್ವೆ ಮನೆತನದ ಅಧಿಕಾರದ ಮುಕ್ತಾಯಕ್ಕೆ ಶಾಸ್ತ್ರಿಯ ಕೊಲೆ ನಿಮಿತ್ತವಾದ್ದರಿಂದ ಆತನ ಹೆಸರು ಇತಿಹಾಸದಲ್ಲಿ ಸ್ಥಾನ ಗಳಿಸಿಕೊಂಡಿದೆ. 		  	(ಎಸ್.ಎಸ್.ಜೆಎ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ